ಮಂಡ್ಯದ ಈ ಸರ್ಕಾರಿ ಶಾಲೆ ಈಗ ಜ್ಞಾನದ ದೇಗುಲ - ಖಾಸಗಿ ಶಾಲೆಗಳಿಗೂ ಸವಾಲು. ದಾಖಲಾತಿಯಲ್ಲೂ ಹೆಚ್ಚಳ
ಸಾಮಾನ್ಯವಾಗಿ ಸರ್ಕಾರಿ ಶಾಲೆಗಳೆಂದರೆ ಪಾಳುಬಿದ್ದ ಕಟ್ಟಡ, ಮೂಲಸೌಕರ್ಯದ ಕೊರತೆ ಎಂಬ ಮಾತು ಕೇಳಿಬರುತ್ತದೆ. ಆದರೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಅಮೃತೇಶ್ವರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ಎಲ್ಲಾ ಮಾತುಗಳನ್ನು ಸುಳ್ಳು ಮಾಡಿ, ಇಂದು ರಾಜ್ಯಕ್ಕೆ ಮಾದರಿಯಾಗಿ ನಿಂತಿದೆ.
ಹೌದು ಇತ್ತೀಚಿನ ದಿನಗಳಲ್ಲಿ ಪೋಷಕರ ಖಾಸಗಿ ಶಾಲೆಗಳ ವ್ಯಾಮೋಹದಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದರೆ, ಇಲ್ಲೊಂದು ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ಟ್ರಸ್ಟ್ ರಚಿಸಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಪಣತೊಟ್ಟು ಮಾದರಿಯಾಗಿದ್ದಾರೆ.ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಅಮೃತೇಶ್ವರನಹಳ್ಳಿಯ ಯುವಕರು ಹಾಗೂ ಗ್ರಾಮಸ್ಥರು ಅಮೃತ ಚಾರಿಟಬಲ್ ಟ್ರಸ್ಟ್ ರಚಿಸಿಕೊಂಡು ನಾಲ್ಕು ವರ್ಷಗಳಿಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ₹23 ಲಕ್ಷ ವ್ಯಯಿಸಿದ್ದಾರೆ.
ಮತ್ತೊಂದು ವಿಶೇಷವೆಂದರೆ ಪ್ರಸ್ತುತ ಸಾಲಿನಲ್ಲಿ ಗ್ರಾಮದ ಯಾವುದೇ ಮಕ್ಕಳು ಎಲ್‌ಕೆಜಿ, ಯುಕೆಜಿಗೆ ಸೇರಿದಂತೆ ಕೆಲ ತರಗತಿಗಳಿಗೆ ಬೇರೆಡೆ ದಾಖಲಾಗದಂತೆ ಅರಿವು ಮೂಡಿಸಿ ಸರ್ಕಾರಿ ಶಾಲೆಗೆ ದಾಖಲಾಗುವಂತೆ ಮಾಡುವಲ್ಲಿ ಟ್ರಸ್ಟ್ ಮತ್ತು ಎಸ್‌ಡಿಎಂಸಿ ಪದಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದ್ದ ಈ ಶಾಲೆಗೆ ಊರಿನ ಜನರು, ಯುವಕರು ಮತ್ತು ದಾನಿಗಳು ಸೇರಿ ಎಲ್ಲ ಕೊರತೆಗಳನ್ನು ನೀಗಿಸಿ ಸ್ಮಾರ್ಟ್ ಶಾಲೆಯನ್ನಾಗಿ ರೂಪಿಸಿದ್ದಾರೆ. 2018ರಲ್ಲಿ ಗ್ರಾಮದ ಸರ್ಕಾರಿ ಶಾಲೆಯ ಸ್ಥಿತಿಯನ್ನು ಕಂಡ ಯುವಕರು ಗ್ರಾಮಸ್ಥರೆಲ್ಲರನ್ನು ಒಂದೆಡೆ ಸೇರಿಸಿ ಅಮೃತ ಚಾರಿಟಬಲ್ ಟ್ರಸ್ಟ್ ರಚಿಸಿದ್ದರು. ಈ ಶಾಲೆಯ ದಾಖಲಾತಿ ಹೆಚ್ಚಳಕ್ಕೆ ಶ್ರಮಿಸಿದ ಕಾರ್ಯಕ್ಕೆ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿ ಶಿಕ್ಷಣ ಇಲಾಖೆಯಿಂದ ₹75 ಸಾವಿರ ನಗದು ಒಳಗೊಂಡಂತೆ 2024-25ನೇ ಸಾಲಿನ 'ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ' ನೀಡುವ ಮೂಲಕ ಪ್ರೋತ್ಸಾಹ ನೀಡಿದೆ. ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರ ಡಿಜಿಟಲ್ ಸೌಲಭ್ಯ ಸಹ ಮಕ್ಕಳ ಕಲಿಕೆಗೆ ನೆರವಾಗುತ್ತಿದೆ.
ಸ್ಮಾರ್ಟ್ ಕ್ಲಾಸ್, ಗ್ರೀನ್ ಬೋರ್ಡ್, ಡೆಸ್ಕ್, ಬೆಂಚುಗಳು, ಹೆಚ್ಚುವರಿ ಶಿಕ್ಷಕಿಯರು, ಕಂಪ್ಯೂಟರ್ ಕ್ಲಾಸ್, ಎಲ್.ಕೆ.ಜಿ, ಯು.ಕೆ.ಜಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮಕ್ಕಳಿಗಾಗಿ ಆಟದ ಮೈದಾನ, ಉದ್ಯಾನ ಹೀಗೆ ಯಾವ ಖಾಸಗಿ ಶಾಲೆಗೂ ಕಮ್ಮಿಯಾಗದಂತೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಒಂದು ಕಾಲದಲ್ಲಿ ಇಲ್ಲಿನ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಇದೀಗ ಮಕ್ಕಳ ಸಂಖ್ಯೆ ಸುಮಾರು 110ಕ್ಕೆ ಏರಿದೆ.
ಟ್ರಸ್ಟ್ ಕಾರ್ಯಯೋಜನೆ ಮತ್ತು ಎಸ್‌ಡಿಎಂಸಿ ರಚನೆಯ ಸಂದರ್ಭದಲ್ಲಿ ಗ್ರಾಮಸ್ಥರು ಪಕ್ಷಾತೀತವಾಗಿ ತೊಡಗಿಸಿಕೊಳ್ಳುತ್ತಾರೆ. ಇದರೊಂದಿಗೆ ಟ್ರಸ್ಟ್ ಹಣಕಾಸಿನ ಸಂಪೂರ್ಣ ವ್ಯವಹಾರ ಬ್ಯಾಂಕ್ ಮೂಲಕವೇ ನಡೆಸುತ್ತಿರುವುದು ವಿಶೇಷವಾಗಿದೆ. ಜನರಿಂದ ಸಂಗ್ರಹಿಸಿ ಹಣ ಮತ್ತು ವಸ್ತುಗಳ ಮಾಹಿತಿ ಹಾಗೂ ಲೆಕ್ಕಪತ್ರಗಳು ಸಾರ್ವಜನಿಕವಾಗಿ ಪ್ರಕಟಿಸಿ ಪಾರದರ್ಶಕತೆ ತೋರಿಸಲಾಗುತ್ತಿದೆ.
ಶಾಲೆಯ ಆವರಣ ಪ್ರವೇಶಿಸುತ್ತಿದ್ದಂತೆ ಮೊದಲು ಗಮನ ಸೆಳೆಯುವುದು ಇಲ್ಲಿನ 'ಅರಿವು ಕೇಂದ್ರ' (ಡಿಜಿಟಲ್ ಗ್ರಂಥಾಲಯ). ಇಲ್ಲಿ ಕೇವಲ ಪುಸ್ತಕಗಳಷ್ಟೇ ಅಲ್ಲ, ಆಧುನಿಕ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಜ್ಞಾನದ ದಾಸೋಹ ನೀಡಲಾಗುತ್ತಿದೆ. ಗೋಡೆಗಳ ಮೇಲೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳು ಮಕ್ಕಳಲ್ಲಿ ಸಾಹಿತ್ಯದ ಬಗೆಗೆ ಆಸಕ್ತಿ ಮೂಡಿಸುತ್ತಿವೆ.
ಶಾಲೆಯ ಆವರಣ ಮತ್ತು ಪ್ರತಿ ತರಗತಿಯ ಗೋಡೆಗಳನ್ನು ಅತ್ಯಂತ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ವಿಜ್ಞಾನದ ಪ್ರಯೋಗಗಳು, ಗಣಿತದ ಸೂತ್ರಗಳು, ಪರಿಸರ ಕಾಳಜಿಯ ಸಂದೇಶಗಳು ಮತ್ತು ದೇಶದ ಮಹಾನ್ ಪುರುಷರ ಚಿತ್ರಗಳು ಗೋಡೆಗಳ ಮೇಲೆ ರಾರಾಜಿಸುತ್ತಿವೆ. ಇದು ಮಕ್ಕಳಿಗೆ ಆಟದ ಜೊತೆಗೆ ಪಾಠವನ್ನು ಕಲಿಸುತ್ತಿದೆ.
ಈ ಕ್ರಾಂತಿಕಾರಿ ಬದಲಾವಣೆಯ ಹಿಂದೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC), ಅಮೃತ ಚಾರಿಟಬಲ್ ಟ್ರಸ್ಟ್ ಹಾಗೂ ಗ್ರಾಮಸ್ಥರ ದೊಡ್ಡ ಶ್ರಮವಿದೆ.
ಶಾಲೆಯು ಸುಸಜ್ಜಿತ ಕಟ್ಟಡದ ಜೊತೆಗೆ ಸುಂದರವಾದ ಉದ್ಯಾನವನವನ್ನು ಹೊಂದಿದೆ. ಶುದ್ಧ ಕುಡಿಯುವ ನೀರು, ಸ್ವಚ್ಛವಾದ ಶೌಚಾಲಯ ಮತ್ತು ಮಕ್ಕಳ ಆಟದ ಮೈದಾನಕ್ಕೆ ಆದ್ಯತೆ ನೀಡಲಾಗಿದೆ. ಖಾಸಗಿ ಶಾಲೆ ಮಾದರಿಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಿರುವುದು ಪೋಷಕರನ್ನು ಆಕರ್ಷಿಸುತ್ತಿದೆ.
ಇಲ್ಲಿನ ಶಿಕ್ಷಕರು ಮಕ್ಕಳ ಕಲಿಕೆಯಲ್ಲಿ ಹೊಸತನವನ್ನು ತಂದಿದ್ದಾರೆ. ಕೇವಲ ಪುಸ್ತಕದ ವಿಷಯವನ್ನಷ್ಟೇ ಬೋಧಿಸದೆ, ಪ್ರಾಯೋಗಿಕ ಕಲಿಕೆಗೆ ಒತ್ತು ನೀಡುತ್ತಿದ್ದಾರೆ. ಇದರಿಂದ ಶಾಲೆಯ ದಾಖಲಾತಿ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಿದೆ.
ಖಾಸಗಿ ಶಾಲೆಗಳಿಂದ ಮಕ್ಕಳನ್ನು ಬಿಡಿಸಿ ಪೋಷಕರು ಈ ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ. ಶಾಲೆಯ ಸುತ್ತಮುತ್ತ ಗಿಡಮರಗಳನ್ನು ಬೆಳೆಸಿ ಹಸಿರೀಕರಣಕ್ಕೆ ಒತ್ತು ನೀಡಲಾಗಿದೆ.ಸ್ಮಾರ್ಟ್ ಕ್ಲಾಸ್ ಸೌಲಭ್ಯದ ಮೂಲಕ ಮಕ್ಕಳಿಗೆ ದೃಶ್ಯ-ಶ್ರವ್ಯ ಮಾಧ್ಯಮದ ಶಿಕ್ಷಣ ನೀಡಲಾಗುತ್ತಿದೆ ಸಮುದಾಯದ ಪ್ರತಿಯೊಬ್ಬರೂ ಶಾಲೆಯನ್ನು ತಮ್ಮ 'ಮನೆ' ಎಂದು ಭಾವಿಸಿ ಅಭಿವೃದ್ಧಿಪಡಿಸುತ್ತಿದ್ದಾರೆ.
ಒಟ್ಟಾರೆಯಾಗಿ, ಅಮೃತೇಶ್ವರನಹಳ್ಳಿಯ ಈ ಶಾಲೆ ಸರ್ಕಾರಿ ವ್ಯವಸ್ಥೆಯ ಮೇಲೆ ಜನರಿಗಿರುವ ನಂಬಿಕೆಯನ್ನು ಹೆಚ್ಚಿಸಿದೆ. ಇಚ್ಛಾಶಕ್ತಿಯಿದ್ದರೆ ಹಳ್ಳಿಯ ಶಾಲೆಯನ್ನೂ ಅರಮನೆಯನ್ನಾಗಿ ಮಾಡಬಹುದು ಎಂಬುದಕ್ಕೆ ಇದೇ ಸಾಕ್ಷಿ.
Comments
Post a Comment